About Us

 ಡಿಜಿ ಯಕ್ಷ ಫೌಂಡೇಶನ್, ಬೆಂಗಳೂರು

ಇದು ಕಲೆ, ಕಲಾವಿದರಿಗೋಸ್ಕರ ಇರುವ ಸಂಸ್ಥೆ. ವಿಶೇಷತಃ ಯಕ್ಷಗಾನ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಮುಂತಾಗಿ ಮನವರಳಿಸುವ, ಮನಕ್ಕೆ ಮುದ ನೀಡುವ ಕಲೆಗಳನ್ನು ಉಳಿಸಿ ಬೆಳೆಸಬೇಕಾದುದು ಮತ್ತು ಮುಂದಿನ ಪೀಳಿಗೆಯನ್ನೂ ಈ ಕಲೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಮುಖ್ಯ ಉದ್ದೇಶ. ಯಕ್ಷಗಾನವಾಗಲೀ, ಭರತನಾಟ್ಯವೇ ಆಗಲಿ ಅಥವಾ ಶಾಸ್ತ್ರೀಯ ಸಂಗೀತವೇ ಆಗಲಿ - ಇವೆಲ್ಲವೂ ಮಕ್ಕಳ ಮನೋದೈಹಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವುದು ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದಲೇ ದೃಢಪಟ್ಟಿರುವ ಅಂಶ.

ಈ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ. ಇದಕ್ಕೆ ಅತ್ಯಂತ ಸೂಕ್ತವಾದ ಪರಿಹಾರವೆಂದರೆ ಈ ರೀತಿಯ ಕಲೆಗಳಲ್ಲಿ ಮಕ್ಕಳನ್ನು ತೊಡಗಿಕೊಳ್ಳುವಂತೆ ಪ್ರೇರೇಪಿಸುವುದು.

ಯಕ್ಷಗಾನ-ಪ್ರಿಯರು, ಯಕ್ಷಗಾನದ ಶ್ರೇಯೋಭಿಲಾಷಿಗಳು ಮತ್ತು ಯಕ್ಷಗಾನ ಪೋಷಕರ ನೆರವಿನೊಂದಿಗೆ ಈ ಸಂಸ್ಥೆಯು ಯಕ್ಷಗಾನವನ್ನು ಯಕ್ಷಗಾನವಾಗಿಯೇ ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಶ್ರಮಿಸಲಿದೆ. ಯಕ್ಷಗಾನದ ಪರಂಪರೆಯ ಮೇಲೆ ಬೆಳಕು ಚೆಲ್ಲುವುದು, ಪರಂಪರೆಯ ಹಿಮ್ಮೇಳ ವಾದನ, ಗಾಯನ, ನರ್ತನ, ಆಭೂಷಣ ಬಣ್ಣಗಾರಿಕೆ ಮುಂತಾದವುಗಳನ್ನು ಯಕ್ಷಗಾನ ರಂಗಭಾಷೆಗೆ ಚ್ಯುತಿ ಬಾರದಂತೆ ಉಳಿಸುವಲ್ಲಿ ಕಾರ್ಯಾಗಾರಗಳು, ಪ್ರದರ್ಶನಗಳು, ಪರಿಣಿತರು-ಅನುಭವಿಗಳು-ಹಿರಿಯರಿಂದ ಮಾರ್ಗದರ್ಶನ ಮಾಲಿಕೆ - ಇವೆಲ್ಲವೂ ನಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳು.

ಇದಕ್ಕಾಗಿಯೇ ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಸೆಕ್ಷನ್ 8 ಕಂಪನಿಯಾಗಿ ಡಿಜಿ ಯಕ್ಷ ಫೌಂಡೇಶನ್, ಬೆಂಗಳೂರು - ಇದು ದಿನಾಂಕ 20 ಏಪ್ರಿಲ್ 2021ರ ಕೋವಿಡ್ ಕಾಲದಲ್ಲಿ ನೋಂದಾವಣೆಗೊಂಡಿತು.

ಯಕ್ಷಗಾನವನ್ನೇ ನಂಬಿದ ಕಲಾವಿದರು ಕೋವಿಡ್ ಕಾಲದಲ್ಲಿ ಅನುಭವಿಸುತ್ತಿರುವ ಸಂಕಟಗಳ ಅರಿವಿದೆ. ಅವರಿಗೆ ನೆರವಾಗಲು ಮತ್ತು ಬಡ/ಹಿರಿಯ ಕಲಾವಿದರಿಗೆ ನೆರವಾಗುವ ಉದ್ದೇಶ ನಮ್ಮ ಸಂಸ್ಥೆಯದು.

ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಯಕ್ಷಗಾನೀಯವಾಗಿಯೇ ಉಳಿಸಲು ಸಹಕರಿಸುತ್ತೀರಲ್ಲ? ನಿಮ್ಮ ತನು-ಮನ-ಧನಗಳ ಸಹಕಾರದಿಂದ ನಮ್ಮ-ನಿಮ್ಮೆಲ್ಲರ ಯಕ್ಷಗಾನವನ್ನು ವಿಶ್ವಗಾನವಾಗಿಸೋಣ.

ಪ್ರೀತಿ ಇರಲಿ, ಥ್ಯಾಂಕ್ಯೂ

-ಡಿಜಿ ಯಕ್ಷ ಫೌಂಡೇಶನ್, ಬೆಂಗಳೂರು

Comments